Sunday, March 6, 2011

ಕಣ್ಣರಿಯದ್ದು..........

ಪ್ರೀತಿ ಅಂದರೆ ಇದೇನಾ? ಅವನ ಒಂದು ಕಣ್ಣ ಸನ್ನೆಗೆ, ಒಂದು ಕಿರು ನಗುವಿಗೆ, ಒಂದು ಪಿಸುಮಾತಿಗೆ ದಿನವೆಲ್ಲ ಕಾಯುವಂತೆ ಮಾಡುವುದೇ ಪ್ರೇಮಾನ? ಅವನ ಒಂದು ಸ್ಪರ್ಶಕೆ ಹಂಬಲಿಸುವಂತೆ ಮಾಡುವ ಶಕ್ತಿ ಇದೆಯಾ ಈ ಪ್ರೀತಿಗೆ? ಪ್ರೀತಿ ಮಧುರ ಅಂತ ಒಂದು ಕ್ಷಣ ಅನ್ನಿಸಿದರೆ, ಮರು ಕ್ಷಣಕ್ಕೆ ಪ್ರೀತಿ ಮೋಸ ಅನ್ನಿಸುತ್ತೆ.

ಪದ್ಮಳ ಕಥೆ ಕೇಳಿದ ಮೇಲೆ ಯಾಕೋ ಪ್ರೀತಿ ಮೇಲೆ ನಂಬಿಕೆ ಹೊರಟು ಹೋಗಿದೆ. ಪ್ರೀತಿ ಅಂದರೆ ಕಾಮದ ಇನ್ನೊಂದು ಮುಖ ಅಸ್ಟೆ ಅಂತ ಅನ್ನಿಸ್ತಿದೆ. ಆದ್ರೆ ಮರು ಕ್ಷಣಕ್ಕೆ ಎಲ್ಲರ ಪ್ರೀತಿ ಇದೆ ರೀತಿ ಇರೋದಿಲ್ಲ, ಎಲ್ಲೋ ಒಂದು ಕಡೆ ನಿಜವಾದ ಪ್ರೀತಿ ಇದೆ ಅಂತಾನು ಅನ್ನಿಸುತ್ತೆ.

ನಾನು ಮುಖ್ಯವಾಗಿ ಇಲ್ಲಿ ಹೇಳೋಕೆ ಹೊರಟಿರೋದು ಪದ್ಮಳ ಕಥೆ. ಕಥೆ ಅಲ್ಲ ವ್ಯಥೆ ಅಂದ್ರು ಸರಿ ಹೋಗತ್ತೆ.

ಅರೆ ನನ್ನ ಪರಿಚಯಾನೆ ಮಾಡಿಕೊಡ್ಲಿಲ್ಲ ಅಲ್ವ? ನಾನು ಸ್ನೇಹ. MBA ಮಾಡ್ಕೊಂಡು ಒಂದು MNC ಕಂಪನಿಯಲ್ಲಿ ಕೆಲಸ ಮಾಡ್ತಿದಿನಿ. PG ವಾಸ. ಬೆಂಗಳೂರಿಗೆ ಬಂದು ಒಂದು ವರ್ಷ ಆಯಿತು. ಮೊದಲ ಬಾರಿಗೆ ಅಪ್ಪ ಅಮ್ಮನನ್ನು ಬಿಟ್ಟು ಇರೋದು.

ಕೆಲಸದ ಸಲುವಾಗಿ ಬೆಂಗಳೂರಿಗೆ ಬಂದು ೧೫ ದಿನಗಳಾಗಿತ್ತು ಅಸ್ಟೆ, ಅಮ್ಮನ ಕೈಯಡುಗೆ ಅಸ್ಟೆ ತಿಂದು ಅಭ್ಯಾಸವಾಗಿದ್ದ ನಂಗೆ PG ಹಾಗು MNC ಕಂಪನಿಯಲ್ಲಿ ಕೊಡುತಿದ್ದ ಊಟ ಸರಿ ಹೋಗದೆ ಆರೋಗ್ಯ ಕೆಡೋಕೆ ಶುರು ಆಯಿತು. ಬಂದ ವಾರದಲ್ಲೇ ಕೆಲಸ ಚೆನ್ನಾಗಿ ಮಾಡ್ತಿನಿ ಅಂತ ಹೊಗಳಿಸಿ ಕೊಂಡಿದ್ದ ನಂಗೆ ಎರಡನೆ ವಾರದಲ್ಲೇ ಟೀಂ ಲೀಡರ್ ನ ಕಟು ಮಾತು ಕೇಳಬೇಕಾಗಿ ಬಂತು, ಕ್ಯಾಬಿನ್ ಇಂದ ಕಣ್ಣೊರೆಸಿ ಕೊಂಡು ಬಂದದನ್ನ ಸುಹಾಸ್ ನೋಡಿ ಬಿಟ್ಟ. ಹೊಸ ಕಂಪನಿಗೆ ಬಂದಾಗಲಿಂದ ತುಂಬ ನೆರವಾಗಿದ್ದ ನನ್ನ ಕೆಲಸಗಳಲ್ಲಿ. ತುಂಬ ಚೂಟಿ, ಕೊಂಚ naughty, ಎಲ್ಲರ ಪ್ರೀತಿ ಪಾತ್ರನಾಗಿದ್ದ. ನನಗಿಂತ ಒಂದು ಎರಡು ವರ್ಷ ಚಿಕ್ಕವನು. ನನ್ನ ಸಮಸ್ಯೆ ತಿಳಿದು ಕೊಂಡು ಊಟಕ್ಕೆ ಒಂದು ಮನೆಗೆ ಕರೆದು ಕೊಂಡು ಹೋದ. ಅದು ಪದ್ಮಳ ಮನೆ. ನನ್ನ ಹಾಗು ಸುಹಾಸ್ ನಂತಹ ಒಂದು ಇಪ್ಪತ್ತು ಮಂದಿಗೆ ಅನ್ನದಾತೆ. ಶುಚಿ ರುಚಿ ಎರಡು ತೃಪ್ತಿ ಕೊಡುವಂಥದ್ದು. ಎಲ್ಲರಿಗೂ ಆಕೆ ಪದ್ಮಮ್ಮ. ಸುಮಾರು ೫೦ ವರ್ಷದ ಕಟ್ಟುಮಸ್ತಾದ ಒಂಟಿ ಹೆಂಗಸು. ಕೆಲ್ಸಕ್ಕಿದ ೧೫ರ ಮನು ಮತ್ತು ಆಕೆ ಇಬ್ಬರೇ ಆ ಮನೆಯಲ್ಲಿದದ್ದು. ನಂಗೆ ಇಷ್ಟವಾಗಿದ್ದು ಅವಳ ಜಡೆ. ಈ ವಯಸಿನಲ್ಲು ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಬಿಟ್ಟರೆ ಕಪ್ಪನೆ ಕಪ್ಪಗಿದ ಹಾವಿನಂಥ ಜಡೆ. ಪ್ರಾಯದಲ್ಲಿ ತುಂಬ ಸುಂದರವಾಗಿದ್ದಳು ಅಂತಾನೆ ಹೇಳಬಹುದು........

ಮುಂದುವರೆಯುವುದು..................